ಇಮೇಜಿಸ್ಟ್ ಕಾವ್ಯ-
ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಇಂಗ್ಲಿಷ್ ಮತ್ತು ಅಮೆರಿಕನ್ ಕವಿಗಳು ರಚಿಸಿದ ಒಂದು ವಿಶೇಷ ರೀತಿಯ ಕಾವ್ಯಪ್ರಕಾರ. ಪ್ರತಿಮಾಸಿದ್ಧಾಂತದ ಮೇಲೆ ರಚನೆಗೊಂಡ ಕಾವ್ಯವೆಂದು ಇದನ್ನು ವಿವರಿಸಬಹುದು. ಕಾವ್ಯದಲ್ಲಿ ಬಳಸಲಾಗುವ ಪ್ರತಿಮಾತಂತ್ರದ ಗುಣಲಕ್ಷಣಗಳನ್ನು ಖಚಿತವಾಗಿ ವಿವರಿಸಿ ಆ ಸೂತ್ರಗಳಿಗನುಸಾರವಾಗಿ ಹೊಸ ಭಾವಗೀತೆಗಳನ್ನು ರಚಿಸಲು 1912ರಲ್ಲಿ ಕವಿ ಎಜ್ರಾ ಪೌಂಡ್ ಲಂಡನ್ನಿನಲ್ಲಿ ಇಮೇಜಿಸ್ಟ್ ಪಂಥವನ್ನೇ ಪ್ರಾರಂಭಿಸಿದ. ಎರಡು ವರ್ಷದ ಅನಂತರ ಅದನ್ನು ಬಿಟ್ಟು, ಆವರ್ತವಾದವೆಂಬ (ವಾರ್ಟಿಸಿಸಂ) ಹೊಸದೊಂದು ತತ್ವ್ತವನ್ನು ಆತ ನಿರೂಪಿಸಿದರೂ ಅದು ಮೊದಲ ತತ್ತ್ವಕ್ಕಿಂತ ಅಷ್ಟೇನೂ ಭಿನ್ನವಾಗಿಲ್ಲದಿದ್ದರಿಂದ ಹಲವು ಕಾಲ ಇಮೇಜಿಸ್ಟ್ ಪಂಥದ ಪ್ರಭಾವ ಮುಂದುವರಿಯಿತು. ಈ ಪಂಥದ ಪ್ರತಿನಿಧಿಗಳು ನಾಲ್ಕುವರ್ಷ (1914-1917) ಪ್ರಕಟಿಸಿದ ಕಾವ್ಯಸಂಕಲನಗಳಲ್ಲಿ ಎಜ್ರಾ ಪೌಂಡ್. ಎಮಿ ಲವೆಲ್. ಜೇಮ್ಸ್ ಜಾಯ್ಸ್, ಡಿ.ಎಚ್.ಲರೆನ್ಸ್ ಮುಂತಾದವರೂ ಸೇರಿದಂತೆ ಹದಿಮೂರು ಮಂದಿ ಉದಯೋನ್ಮುಖ ಕವಿಗಳ ಪ್ರಪ್ರಥಮ ಕೃತಿಗಳು ಬೆಳಕು ಕಂಡವು, ಅಮೆರಿಕ, ಇಂಗ್ಲೆಂಡುಗಳಲ್ಲಿ ಈ ಹೊಸ ತತ್ತ್ವದ ಪ್ರಸಾರ, ಪ್ರಚಾರಗಳ ಸಲುವಾಗಿಯೇ ಕೆಲವು ನಿಯತಕಾಲಿಕಗಳು ಪ್ರಕಟವಾದುವು.

	ಟಿ. ಇ. ಹ್ಯೂಲ್ಮನನ್ನು (1886-1917) ಪ್ರತಿಮಾಸಿದ್ಧಾಂತದ ಮೂಲಪುರುಷನೆನ್ನುತ್ತಾರೆ. ರೊಮ್ಯಾಂಟಿಕ್ ಪ್ರವೃತ್ತಿಯ ನಿವಾರಣೆಯಾಗಬೇಕಾದರೆ ಅದರ ಬದಲು ಶಬ್ದಾಡಂಬರವಿಲ್ಲದ, ಖಚಿತ ಅಭಿವ್ಯಕ್ತಿ ಹಾಗೂ ತಂತ್ರದಿಂದ ಕೂಡಿದ ಬೇರೊಂದು ವಿಧಾನ ಸೃಷ್ಟಿಯಾಗಬೇಕೆಂದು ಆತ ವಾದಿಸಿದ. ಈ ವಾದದ ವಿಚಾರದ ಒಂದು ಸ್ವರೂಪ ಇಮೇಜಿಸ್ಟ್ ಕಾವ್ಯ. ಅದು ಆ ಕಾಲದಲ್ಲಿ ಹೊರಹೊಮ್ಮಿದ ಸಿಂಬಲಿಸಂ, ಫ್ಯೂಚರಿಸಂ, ಕ್ಯೂಬಿಸಂ ಮುಂತಾದ ಹಲವು ಹೊಸ ಪ್ರವೃತ್ತಿಗಳ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿತು. ಕಾವ್ಯದಲ್ಲಿ ವಿಚಾರದ ವಿಕಾಸಕ್ಕಿಂತ ರಚನೆ, ಶಿಲ್ಪ, ಪ್ರತಿಮೆ, ಭಾಷೆ ಇದೇ ಮುಖ್ಯವೆನ್ನುವುದು ಈ ಪಂಥದ ತತ್ತ್ವ. 1915ರಲ್ಲಿ ಪ್ರಕಟವಾದ ಸಮ್ ಇಮೇಜಿಸ್ಟ್ ಪೊಯಟ್ಸ್ ಎನ್ನುವ ಕಾವ್ಯ ಸಂಕಲನದಲ್ಲಿ ಉಲ್ಲೇಖಿಸಿದ ಸೂತ್ರಗಳು ಈ ಪಂಥದ ಘೋಷಣೆಗಳಂತಿದ್ದವು. ಅವುಗಳಲ್ಲಿ 1. ಕಾವ್ಯದಲ್ಲಿ ಕೇವಲ ಅಲಂಕಾರಿಕವಲ್ಲದ, ಖಚಿತ ದಿನಬಳಕೆಯ ಆಡುಮಾತುಗಳಿಗೆ ಅವಕಾಶವಿರಬೇಕು. 2. ಮನಸ್ಸಿನ ಅವ್ಯಕ್ತ ಸ್ಥಿತಿಗತಿಗಳ ಅಭಿವ್ಯಕ್ತಿಗಾಗಿ ಹೊಸ ವಲಯಗಳನ್ನು ಸೃಜಿಸಬೇಕು. 3. ವಸ್ತುವಿನ ಆಯ್ಕೆಯಲ್ಲಿ ಕವಿಗೆ ಪೂರ್ಣಸ್ವಾತಂತ್ರ್ಯವಿರಬೇಕು, 4. ಕಾವ್ಯದಲ್ಲಿ ಸುಸಂಗತ ಪ್ರತಿಮೆಗಳ ವಿನ್ಯಾಸವಿರಬೇಕು. ಅಸ್ಪಷ್ಟ ಸರ್ವಸಾಮಾನ್ಯ ವಿವರಗಳಿಗಿಂತಲೂ ಹೆಚ್ಚಾಗಿ ವಿವರಗಳ ನಿಚ್ಚಳ ಅಭಿವ್ಯಕ್ತಿ ಅತ್ಯವಶ್ಯಕ. 5. ಪ್ರತಿಮಾವಿನ್ಯಾಸ ಭದ್ರವಾದ, ಬನಿಯುಳ್ಳ ಪ್ರಖರ ಚಿತ್ರಣವನ್ನು ಸಾಧಿಸುವಂತಾಗಬೇಕು-ಇತ್ಯಾದಿ ಸೂತ್ರಗಳು ಸೇರಿದ್ದುವು.

	ಪ್ರಥಮ ಮಹಾಯುದ್ಧದ ಕೊನೆಯಲ್ಲಿ ಇಮೇಜಿಸ್ಟ್ ಕಾವ್ಯಪಂಥ ಅವನತಿ ಹೊಂದಿತು. ಈ ಪಂಥ ನಿರ್ದೇಶಿಸಿದ ಶಿಸ್ತು. ಸಂಯಮಗಳು ಅಂದಿನ ಅಭಿವ್ಯಕ್ತಿಯ ಗೊಂದಲ ನಿವಾರಿಸಿ, ಏಕಸೂತ್ರ ರೂಪಿಸಲು ಸ್ವಲ್ಪಮಟ್ಟಿಗೆ ಶಕ್ತವಾದುವು. ಆದರೆ ಕಾವ್ಯದ ಜೀವನಾಡಿಯಾದ ಅರ್ಥ, ಕವಿ ಬಳಸುವ ಪ್ರತಿಮೆ ಇವೆರಡರ ನಡುವೆ ಸಾಂಗತ್ಯ ಸಾಧಿಸಲು ಕೆಲವು ಕಾಲದ ಅನಂತರ ಉಂಟಾದ ಅಸಮರ್ಥತೆ ಅದರ ಅವನತಿಗೆ ಮುಖ್ಯ ಕಾರಣವಾಯಿತು.							(ಎಚ್.ಕೆ.ಆರ್.)

ಇಮೇಜ್ ಎನ್ನುವುದನ್ನು ಪೌಂಡ್ “ಕಾಲದ ಒಂದು ಕ್ಷಣದಲ್ಲಿ ಒಂದು ಬೌದ್ಧಿಕ ಮತ್ತು ಭಾವನಾತ್ಮಕ ಸಂಕೀರ್ಣವನ್ನು ನಿರೂಪಿಸುವಂಥದು” ಎಂದು ವಿವರಿಸಿದ. ತನ್ನ ಇನ್ ಎ ಸ್ಟೇಷನ್ ಆಫ್ ದ ಮೆಟ್ರೋ ಕವನವನ್ನು ಉದಾಹರಣೆಯಾಗಿ ಕೊಟ್ಟ; ಗುಂಪಿನಲ್ಲಿ ಈ ಮುಖಗಳ ಅಸಾಮಾನ್ಯ ದರ್ಶನ, 
ತೊಯ್ದ ಕಪ್ಪು ರಂಬೆಯ ಮೇಲಿನ ದಳಗಳು.

ಇಮೇಜ್ ಒಳಗೊಳ್ಳುವ ಅಂಶಗಳು ವಾಸ್ತವಕ್ಕೆ ನಿಷ್ಠವಾಗಿರುತ್ತದೆ, ಆದರೆ ಒಟ್ಟಿಗೆ ಸೇರಿ ಇನ್ನು ಹೆಚ್ಚಿನ ವಾಸ್ತವತೆಯನ್ನು ಸೃಷ್ಟಿಸುತ್ತದೆ ಎನ್ನುವುದು ಅವನ ವಿವರಣೆ. 

ಇಮೇಜಿಸಂ ಪಂಥದ ಜನನವು ಇಂಗ್ಲೆಂಡ್-ಅಮೇರಿಕಗಳಲ್ಲಿ ಆಧುನಿಕ ಕಾವ್ಯದ ಪ್ರಾರಂಭದ ಸೂಚನೆಯೂ ಹೌದು, ರೋಮ್ಯಾಂಟಿಕ್-ವಿಕ್ಟೋರಿಯನ್ ಸಂಪ್ರದಾಯವು ಇಲ್ಲಿಗೆ ಮುಕ್ತಾಯವಾಯಿತು. ಖಚಿತತೆ, ವಸ್ತುನಿಷ್ಠತೆಗಳಿಗೆ ಕವಿಗಳು ಪ್ರಾಧಾನ್ಯ ನೀಡಲಾರಂಭಿಸಿದರು. ಅಮೂರ್ತತೆ ರೆಟರಿಕ್ ಮತ್ತು ಅನಗತ್ಯ ಅಲಂಕಾರಗಳನ್ನು ಕಟ್ಟುನಿಟ್ಟಾಗಿ ದೂರವಿಡಬೇಕೆಂಬುದು ಪೌಂಡ್‍ನ ಎಚ್ಚರಿಕೆ. ಅನಗತ್ಯವಾದ ಒಂದು ಶಬ್ದವನ್ನು ಬಳಸಲಾಗದು, ಲಯವು ಸಂಗೀತವನ್ನು (ಮ್ಯೂಸಿಕಲ್ ಫ್ರೇಸ್) ಅನುಸರಿಸಬೇಕು, ಎನ್ನುವುದು ಈ ಪಂಥದವರ ನಿಯಮಗಳು.

	ಇಮೇಜಿಸಂನ ಸಾಧನೆಯನ್ನು ಕುರಿತು ವಿಮರ್ಶಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಟಿ.ಎಸ್.ಎಲಿಯಟ್ ಇದರ ಸಾಧನೆ ಸೃಜನಶೀಲವಾದುದಕ್ಕಿಂತ ವಿಮರ್ಶಾತ್ಮಕವಾದುದು, ವಿಮರ್ಶೆಯಲ್ಲಿ ಇದಕ್ಕೆ ಮಹತ್ವ ಉಂಟು ಎಂದ. ಕಾವ್ಯಕ್ಕೆ ವಸ್ತು ಯಾವುದಾದರೂ ಆದೀತು ಎನ್ನುವ ಇದರ ನಿಲುವನ್ನು ನಿರಾಲಂಕೃತ ಮೇಲ್ಮೈಯೇ ಕವನದ ಅರ್ಥ ಎನ್ನುವ ಈ ಪಂಥದ ಸಮೀಕರಣವನ್ನು ವ್ಯಾಲೆಸ್ ಸ್ಟೀವನ್ಸ್ ವಿರೋಧಿಸಿದ. ಈ ಪಂಥವು ಆಗ ಪ್ರಭಾವಶಾಲಿಯಾಗಿದ್ದ ರೋಮ್ಯಾಂಟಿಸಿಸಂ ಪಂಥದ ಪುನರ್ವಿಮರ್ಶೆಯನ್ನು ಮಾಡಿದ್ದು ದೊಡ್ಡ ಕೊಡುಗೆ ಎನ್ನಬೇಕು. ಕಾವ್ಯ ಪ್ರತಿಮೆಯ ಸಾಧ್ಯತೆ ಸಾಮಥ್ರ್ಯಗಳಿಗೆ ಪ್ರಾಧಾನ್ಯವನ್ನು ನೀಡಿದ್ದು ಮತ್ತೊಂದು ಸಾಧನೆ. ಇದರಿಂದ ಈ ಪಂಥವು ಆಧುನಿಕ ಕಾವ್ಯದ ಮೂಲ ಘಟಕವನ್ನು ಗುರುತಿಸಿದಂತಾಯಿತು, ಎಂದು ಸ್ಟೀಫನ್ ಸ್ಪೆಂಡರ್ ಹೇಳಿದ. ಆದರೆ ಇಮೇಜ್‍ಗೆ ಅತಿ ಪ್ರಾಧಾನ್ಯ ನೀಡಿತೆಂಬುದು ನಿಜ.
(ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ